ಉದ್ಯಾನ: ಅಲಂಕಾರ ಸಸ್ಯಗಳನ್ನು ಉಪಯುಕ್ತ ಹಾಗೂ ಸಂತೋಷದಾಯಕ ರೀತಿಯಲ್ಲಿ ಶಾಸ್ತ್ರೀಯವಾಗಿ ಬೆಳೆಸಿರುವ ಸ್ಥಳವೇ ಉದ್ಯಾನ (ಪಾರ್ಕ್). ದಣಿದು ಬಂದ ಮನುಷ್ಯ ಸಸ್ಯಸಮೂಹದ ತಂಪು ಮತ್ತು ಆಕರ್ಷಕ ಪರಿಸರದಲ್ಲಿ ಚೈತನ್ಯವನ್ನೂ ಮನೋರಂಜ£ ೆಯನ್ನೂ ಪಡೆಯಲು ಮಾಡಿರುವ ಈ ಏರ್ಪಾಡು ಪ್ರಾಚೀನಕಾಲದಿಂದಲೂ ನಡೆದು ಬಂದಿದೆ. ಉದ್ಯಾನಕಲೆ ರಸಿಕನಾದ ಮಾನವನ ಕೈಯಲ್ಲಿ ಕಾಲಾನುಸಾರ ಪರಿವರ್ತನೆಗೊಂಡು ಇಂದು ಒಂದು ಶಾಸ್ತ್ರವಾಗಿ ಪರಿಣಮಿಸಿದೆ. ಈ ಕಲೆಗೆ ಸಸ್ಯವಿಜ್ಞಾನದ ಹಿನ್ನೆಲೆಯೂ ಸೌಂದರ್ಯಪ್ರಜ್ಞೆಯೂ ಬೇಕು.

ಉದ್ಯಾನಗಳು ಮನುಷ್ಯನಿರ್ಮಿತ. ಇವು ಭೌಗೋಳಿಕ ಪರಿಸ್ಥಿತಿ, ಹವಾಗುಣ ಮೊದಲಾದ ನೈಸರ್ಗಿಕ ಕಾರಣಗಳ ಜೊತೆಗೆ ಜನರ ಸೌಂದರ್ಯದೃಷ್ಟಿಯನ್ನೂ ವಿಶೇಷವಾಗಿ ಅವಲಂಬಿಸಿವೆ. ಒಂದು ಉದ್ಯಾನವನ್ನು ನಿರ್ಮಿಸುವ ಮೊದಲು ಆ ಸ್ಥಳದಲ್ಲಿರುವ ಗುಡ್ಡ, ತಗ್ಗು, ಕೆರೆ, ತೊರೆ ಮುಂತಾದ ನೈಸರ್ಗಿಕ ಸನ್ನಿವೇಶಗಳನ್ನು ಲಕ್ಷ್ಯದಲ್ಲಿಟ್ಟುಕೊಂಡು ಅವನ್ನು ಪೂರ್ಣವಾಗಿ ಅಳವಡಿಸಿಕೊಳ್ಳುವಂಥ ಪ್ರಾಯೋಗಿಕ ಆಲೇಖ್ಯ ತಯಾರಿಸಬೇಕು. ಉದ್ಯಾನಗಾರಿಕೆಯಲ್ಲಿ ಹೆಚ್ಚು ಪರಿಶ್ರಮವಿರುವ ವ್ಯಕ್ತಿಗೆ ಇದನ್ನು ತೋರಿಸಿ ಸೂಕ್ತ ಸಲಹೆಗಳನ್ನು ಪಡೆದು ಅನಂತರ ಕೆಲಸಕ್ಕೆ ಕೈಹಾಕುವುದು ಒಳ್ಳೆಯದು.

ಭಾರತೀಯ ಸಂಸ್ಕೃತಿಗೆ ನಿಸರ್ಗವೇ ತಳಹದಿ. ವನ ಮತ್ತು ಆಶ್ರಮಗಳು ಭಾರತೀಯ ಸಂಸ್ಕೃತಿಯ ತೌರುಮನೆ. ಗೌತಮಬುದ್ಧನ ಕಾಲದಲ್ಲಿಯೇ ಉದ್ಯಾನಗಳು, ಅವುಗಳ ಆವಶ್ಯಕತೆ, ರೂಪರೇಖೆಗಳು ಮುಂತಾದ ಎಲ್ಲ ವಿಚಾರಗಳೂ ಲಿಖಿತವಾಗಿದ್ದುವು. ಪುರಾಣಕಾಲದಲ್ಲೂ ಬೃಂದಾವನ, ಇಂದ್ರವನಗಳ ವರ್ಣನೆಗಳಿವೆ. ಮೊಘಲರ ಕಾಲದಲ್ಲಿ ಉದ್ಯಾನಗಳ ರಚನೆ ಉಪಯೋಗ ಬದಲಾದುದನ್ನು ಕಾಣುತ್ತೇವೆ. ಅಂದಿನವು ರಾಜರುಗಳ ಮತ್ತು ರಾಣಿಯರ ನಲಿವು ಮತ್ತು ಭೋಗಕ್ಕೆ ಹೆಚ್ಚಿಗೆ ಮುಡುಪಾಗಿದ್ದುವು. ಕಾಶ್ಮೀರದ ಶಾಲಿಮಾರ್ ಉದ್ಯಾನ, ತಾಜಮಹಲ್ ಉದ್ಯಾನ, ಕರ್ನಾಟಕ ರಾಜ್ಯದಲ್ಲಿ ದರಿಯಾದೌಲತ್, ಗುಂಬಜ್ ಮತ್ತು ಲಾಲ್ಬಾಗ್ ಇವು ಮೊಘಲ್ ಉದ್ಯಾನಕಲೆಗೆ ಉತ್ತಮ ಉದಾಹರಣೆಗಳು. ಬ್ರಿಟಿಷರ ಕಾಲದಲ್ಲಿ ಉದ್ಯಾನಗಳ ರಚನೆ, ರೂಪರೇಖೆಗಳು ಮತ್ತಷ್ಟು ಬದಲಾವಣೆಯಾದುವು. ಆಂಗ್ಲರ ಕಾಲದಲ್ಲಿ ನಿರ್ಮಿತವಾದ ಉದ್ಯಾನಗಳಲ್ಲಿ ಮಾನಸಿಕ, ದೈಹಿಕ ಮತ್ತು ಆರ್ಥಿಕ ಮುಂತಾದ ಅಂಶಗಳಿಗೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿತ್ತು. ಹೊಸ ದೆಹಲಿಯಲ್ಲಿರುವ ಉದ್ಯಾನಗಳು ಮತ್ತು ಮುನಿಸಿಪಲ್ ಪಾರ್ಕ್, ಕೃಷ್ಣರಾಜಸಾಗರದಲ್ಲಿನ ಬೃಂದಾವನ, ಬೆಂಗಳೂರು ಕಬ್ಬನ್ ಪಾರ್ಕ್ ಮತ್ತು ಪುರಸಭೆಯ ಉದ್ಯಾನಗಳು, ನೂತನವಾಗಿ ನಿರ್ಮಾಣವಾಗಿರುವ ವಿಧಾನಸೌಧದ ಉದ್ಯಾನ-ಇವೆಲ್ಲ ಆಂಗ್ಲ ಉದ್ಯಾನ ಕಲೆಯನ್ನು ಪ್ರತಿಬಿಂಬಿಸುತ್ತವೆ. ಇತ್ತೀಚೆಗೆ ಮುನಿರಾಬಾದಿನಲ್ಲಿ ಜಪಾನ್ ಮಾದರಿಯ ಉದ್ಯಾನ ನಿರ್ಮಿತವಾಗಿದೆ. ಹೊಸದಾಗಿ ನಿರ್ಮಾಣವಾಗುತ್ತಿರುವ ಕೆಲವು ತೋಟಗಳನ್ನು ಆರ್ಥಿಕ ಹಾಗೂ ಉಪಯುಕ್ತತೆಯ ದೃಷ್ಟಿಯಿಂದ  ಸಸ್ಯೋದ್ಯಾನಗೋಳನ್ನಾಗಿ (ಸಸ್ಯಶಾಸ್ತ್ರೀಯ) ರೂಪಿಸುತ್ತಿದ್ದಾರೆ.
ಲಂಡನ್ನಿನಲ್ಲಿರುವ ಜಗದ್ವಿಖ್ಯಾತ ಕ್ಯೂ ಸಸ್ಯೋದ್ಯಾನ ಪ್ರಪಂಚದ ಉದ್ಯಾನಗಳ ಮತ್ತು ಎಲ್ಲ ಸಸ್ಯೋದ್ಯಾನಗಳ ತಾಯಿ; ಇದರ ರೂಪರೇಖೆಗಳ ಮೇಲೆಯೇ ನಿರ್ಮಿತವಾಗಿರುವ ಇತರ ಕೆಲವು ಸಸ್ಯೋದ್ಯಾನಗಳೆಂದರೆ ಕೋಲ್ಕತ್ತ ಲಖನೌ, ಬೆಂಗಳೂರು (ಲಾಲ್ಬಾಗ್), ಶ್ರೀಲಂಕ (ಪೆರಡೀನಿಯಾ), ಸಿಂಗಪುರ ಮುಂತಾದೆಡೆಗಳಲ್ಲಿರುವವು.

ಉದ್ಯಾನದ ಭಾಗಗಳು
ಉದ್ಯಾನವಿಡೀ ಒಂದೇ ರೂಪದಲ್ಲಿದ್ದರೆ ಆ ನೀರಸ ಏಕತೆ ಬೇಸರ ತರಿಸುತ್ತದೆ. ಉದ್ಯಾನಕಲಾಶಾಸ್ತ್ರದ ಪ್ರಕಾರ ಒಂದು ಒಳ್ಳೆಯ ಉದ್ಯಾನ ರಸ್ತೆ, ಹುಲ್ಲು ಹಾಸು ಹೂಮಡಿ, ಅಂಚು, ಅಲಂಕಾರ ಬೇಲಿ, ಕೊಳ, ಕಲ್ಲೇರಿ (ರಾಕ್ ಗಾರ್ಡನ್) ಸಾಲುಮರಗಳ ರಸ್ತೆ ಮುಂತಾದ ವೈವಿಧ್ಯಪೂರ್ಣ ಭಾಗಗಳಿಂದ ಕೂಡಿರಬೇಕು.

ರಸ್ತೆ
ಉದ್ಯಾನದ ರಸ್ತೆಗಳು ಸಾಮಾನ್ಯವಾಗಿ ನೇರವಾಗಿರಕೂಡದು. ಅಂದಮಾತ್ರಕ್ಕೆ ಅವು ಸಿಕ್ಕಾಪಟ್ಟೆ ಇರಬೇಕೆಂದಲ್ಲ. ಸಾಲುಮರಗಳಿರುವ ದೊಡ್ಡ ರಸ್ತೆಗಳನ್ನು ಬಿಟ್ಟರೆ ಉಳಿದ ರಸ್ತೆ ಮತ್ತು ಕಾಲುದಾರಿಗಳು ಡೊಂಕು ಡೊಂಕಾಗಿದ್ದರೆ ಚೆನ್ನ. ಸಾಮಾನ್ಯವಾಗಿ ರಸ್ತೆ ಮತ್ತು ಕಾಲುದಾರಿಗಳ ಅಂಚುಗಳನ್ನು ಕಲ್ಲು ಅಥವಾ ಅಲಂಕಾರ ಇಟ್ಟಿಗೆ ಅಥವಾ ಅಂಚು ಸಸ್ಯಗಳಿಂದ ನಿರ್ಮಿಸಿರುತ್ತಾರೆ.
ಹುಲ್ಲುಹಾಸು
ಮಟ್ಟಸ ಭೂಮಿಯಲ್ಲಿ ನಿರ್ದಿಷ್ಟವಾಗಿ ಒಂದೇ ಜಾತಿಯ ಹುಲ್ಲನ್ನು ಶಾಸ್ತ್ರೀಯವಾಗಿ ಬೆಳೆಸಿರುವ ಸ್ಥಳದ ಹೆಸರು ಹುಲ್ಲುಹಾಸು ಇದು ಉದ್ಯಾನದ ಮುಖ್ಯ ಭಾಗ ಮತ್ತು ಅದರ ಬಹುಭಾಗವನ್ನು ಆಕ್ರಮಿಸಿರುತ್ತದೆ. ಇದು ಸಾಮಾನ್ಯವಾಗಿ ಅಲಂಕಾರ ಇಟ್ಟಿಗೆ, ನಯವಾದ ಕಲ್ಲು ಅಥವಾ ಅಂಚುಸಸ್ಯಗಳ ಸಾಲುಗಳಲ್ಲಿ ಮುಗಿಯುತ್ತದೆ. ಉದ್ಯಾನದ ಹುಲ್ಲುಹಾಸಿನ ಮೇಲೆ ಪೊದೆ, ಮರಗಳು, ಹೂಮಡಿ, ಅಲಂಕಾರ ಸಸ್ಯದ ಮಡಿ ಇತ್ಯಾದಿಗಳು ಇರುತ್ತವೆ.
ಅಂಚುಗಳು
ಉದ್ಯಾನದಲ್ಲಿರುವ ರಸ್ತೆ ಮತ್ತು ಹುಲ್ಲುಹಾಸಿನ ಅಂಚುಗಳನ್ನು ಹಾಗೆಯೇ ಬಿಡುವುದಕ್ಕಿಂತ ಅಲಂಕಾರ ಇಟ್ಟಿಗೆ, ನಯವಾದ ಕಲ್ಲು, ಕುಳ್ಳಾಗಿ ಸುಂದರವಾಗಿರುವ ಸಸ್ಯಸಾಲುಗಳು ಮುಂತಾದವುಗಳಿಂದ ಸುಲಕ್ಷಣಗೊಳಿಸಬೇಕು.
ಅಲಂಕಾರ ಬೇಲಿ
ಉದ್ಯಾನದಲ್ಲಿರುವ ಹುಲ್ಲುಹಾಸು, ರಸ್ತೆ, ಕಲ್ಲೇರಿ ಮುಂತಾದವನ್ನು ಬೇರ್ಪಡಿಸಲು ಅಂಚುಗಳಿಗಿಂತ ಎತ್ತರವಾಗಿ ಬೆಳೆಸಿರುವ ಸಸ್ಯಸಮೂಹಕ್ಕೆ ಅಲಂಕಾರ ಬೇಲಿ ಎಂದು ಹೆಸರು. ಇದು ಸ್ವಲ್ಪಮಟ್ಟಿಗೆ ರಕ್ಷಣೆ ಮತ್ತು ಸೌಂದರ್ಯವನ್ನು ನೀಡುತ್ತದೆ. 
ಕೊಳ
ಉದ್ಯಾನದಲ್ಲಿರುವ ತಗ್ಗಾದ ಪ್ರದೇಶಗಳಲ್ಲಿ ಸಸ್ಯಗಳನ್ನು ಬೆಳೆಸುವುದು ಬಹಳ ಕಷ್ಟ. ಆದ್ದರಿಂದ ಇಂಥ ಪ್ರದೇಶಗಳನ್ನು ಕೊಳಗಳಾಗಿ ಪರಿವರ್ತಿಸಿ, ಅವುಗಳಲ್ಲಿ ಕಮಲ, ನೈದಿಲೆ ಮುಂತಾದ ಸಸ್ಯಗಳನ್ನು ಬೆಳೆಸುವುದರಿಂದ ಉದ್ಯಾನ ಶೋಭಿಸುತ್ತದೆ. ಜೊತೆಗೆ ಕೊಳದಲ್ಲಿರುವ ನೀರನ್ನು ಅಕ್ಕಪಕ್ಕದ ಸಸ್ಯಗಳಿಗೆ ನೀರಾವರಿಗಾಗಿ ಉಪಯೋಗಿಸಬಹುದು. ಈ ಕೊಳದಲ್ಲಿ ವಿವಿಧ ರೀತಿಯ ಮೀನುಗಳು, ಕಪ್ಪೆಗಳು, ಬಾತುಗಳು, ಹಂಸಗಳು ಮುಂತಾದ ಜಲಚರ ಪ್ರಾಣಿಪಕ್ಷಿಗಳಿದ್ದರೆ ಈ ಕೊಳದ ಮತ್ತು ಉದ್ಯಾನದ ಅಂದ ಹೆಚ್ಚುತ್ತದೆ. ಇದರಿಂದ ಜಲಚರ ಪ್ರಾಣಿಪಕ್ಷಿಗಳ ಪರಿಚಯಕ್ಕೂ ಅನುಕೂಲವಾಗುತ್ತದೆ.
ಸಾಲುಮರಗಳ ರಸ್ತೆ
ಉದ್ಯಾನದಲ್ಲಿರುವ ಎಲ್ಲ ರಸ್ತೆಗಳೂ ಚಿಕ್ಕವಾಗಿರಬಾರದು. ವಿಶಾಲ ಅಂಚಿನ ಒಂದೆರಡಾದರೂ ದೊಡ್ಡ ರಸ್ತೆಗಳಿದ್ದರೆ ಸೊಗಸು. ಅಲ್ಲದೆ ಸಾರಿಗೆಗೆ ಅನುಕೂಲ. ಉದ್ಯಾನದಲ್ಲಿ ಉಪಯೋಗಿಸುವ ಕಾರ್ಯನಿರತವಾಹನಗಳು ಪೆಟ್ರೋಲ್ / ಡೀಸೆಲ್ ವಾಹನಗಳಾಗಿರದೆ, ವಿದ್ಯುತ್ ಚಾಲಿತ / ಸೌರಶಕ್ತಿ ಚಾಲಿತ ವಾಹನಗಳಾಗಿದ್ದರೆ ನಿಸರ್ಗಕ್ಕೆ ಮಾಲಿನ್ಯದಿಂದ ಧಕ್ಕೆ ಯಾಗುವುದಿಲ್ಲ.
ಭಾರತ ದೇಶದ ಉದ್ಯಾನಗಳಿಗೆ-ಕೋಲ್ಕತ್ತ ಸಸ್ಯೋದ್ಯಾನ, ಲಖನೌ ಸಸ್ಯೋದ್ಯಾನ, ನೋಡಿ-ಲಾಲ್ಬಾಗ್, ಬೃಂದಾವನ.	(ಎಂ.ಎಚ್.ಎಂ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ